
ಸಂಪಾದಕರ ಬರಹ

ಪ್ರಿಯ ಓದುಗರೇ ,
ಕಳೆದ ಸಂಚಿಕೆಯಲ್ಲಿ ಕೈಬರಹದ ಪ್ರಶ್ನೆ ಬಹಳ ಸುಲಭವಾಗಿತ್ತು. ಆದರೂ ಕೇವಲ ಒಬ್ಬರೇ ಒಬ್ಬರು ಬರೆದು ಕಳಿಸಿರುವುದು ಸ್ವಲ್ಪ ಬೇಸರ ತಂದಿದೆ. ಈ ಸಂಚಿಕೆಯಿಂದಲಾದರೂ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಿ. ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಕೂಡ ಇದೇ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ನಿಮ್ಮ ಅಭಿಪ್ರಾಯಗಳು ವಿಭಾಗದಲ್ಲಿ ನೋಡಬಹುದು.
ಕಳೆದ ಸಂಚಿಕೆಯಲ್ಲಿ ಬಹಳ ಓದುಗರು ಡಾಕ್ಟರ್ ನಾಗೇಶ್ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಡಾಕ್ಟರ್ ನಾಗೇಶ್ ಅವರಿಗೆ ಅಭಿನಂದನೇಗಳು
ಈ ವರ್ಷದ ನನ್ನ ಹುಟ್ಟುಹಬ್ಬದ ( 25-ಜುಲೈ ) ಅಂಗವಾಗಿ, ಆಸಕ್ತರಿಗಾಗಿ “ಚಾಟ್‌ಜಿಪಿಟಿ ಪರಿಚಯ” ಎಂಬ ಎರಡು ಉಚಿತ ಆನ್‌ಲೈನ್ ತರಗತಿಗಳನ್ನು ನಡೆಸಲು ನಿರ್ಧರಿಸಿದ್ದೇನೆ.
ಪ್ರತಿ ತರಗತಿಯ ಅವಧಿ: 1 ಗಂಟೆ
ಈ ತರಗತಿಗಳಲ್ಲಿ ಚಾಟ್‌ಜಿಪಿಟಿಯನ್ನು ಕನ್ನಡದಲ್ಲಿಯೂ ಹಾಗೂ ಇಂಗ್ಲಿಷ್‌ನಲ್ಲಿಯೂ ಹೇಗೆ ಬಳಸುವುದು, ದೈನಂದಿನ ಜೀವನದಲ್ಲಿ ಮತ್ತು ಬರವಣಿಗೆಯಲ್ಲಿ ಹೇಗೆ ಉಪಯೋಗಿಸಬಹುದು ಎಂಬುದನ್ನು ಸರಳವಾಗಿ ತಿಳಿಸಲಾಗುವುದು.
ಇದು ನನ್ನ ಹುಟ್ಟುಹಬ್ಬದ ಕೊಡುಗೆ. ಯಾವುದೇ ಶುಲ್ಕವಿಲ್ಲ.
ಆಸಕ್ತರು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಬಹುದು. ವಿವರಗಳನ್ನು ಮುಂದೆ ನನ್ನ ಲೇಖನ : ನನ್ನ ಹೊಸ ಗೆಳೆಯ ಚಾಟ್ ಜಿ ಪಿ ಟಿ ಎಂಬುದರಲ್ಲಿ ಕೊಡಲಾಗಿದೆ.

ಸ್ಪರ್ಧಾ ವಿಭಾಗ

ಈ ಸಂಚಿಕೆಯ ಸ್ಪರ್ಧೆ : ಈ ಕೆಳಗೆ ಕೊಟ್ಟಿರುವ ಮಂಡಲ ಚಿತ್ರ ವನ್ನು A4 ಹಾಳೆಯಲ್ಲಿ ಪ್ರಿಂಟ್ ತೆಗೆದು, ಬಣ್ಣಗಳನ್ನು ತುಂಬಿ , ನಿಮ್ಮ ಹೆಸರು ಬರೆದು, ಅದರ ಚಿತ್ರ ತೆಗೆದು ಕಳಿಸಿವುದು . ಆಕರ್ಷಕ ಚಿತ್ರಕ್ಕೆ ಬಹುಮಾನ. (ಈ ಸ್ಪರ್ಧೆಯ ಸಲಹೆ ಕೊಟ್ಟವರು : ಶ್ರೀಮತಿ ಗೌರಿ ಭಟ್ . ಅವರಿಗೆ ಧನ್ಯವಾದಗಳು.)

ನಿಯಮಗಳು
1. ಇದೇ ಮಂಡಲದ ಸ್ಕ್ರೀನ್ ಶಾಟ್ ತೆಗೆದುಕೊಳ್ಳಕೊಂಡು, ಪ್ರಿಂಟ್ ತೆಗೆಯಬೇಕು. ಬೇರೆ ಯಾವುದೇ ಮಂಡಲ ಬೇಡ.
2. software ಅಥವಾ ಅಪ್ ನಿಂದ ಬಣ್ಣ ಹಾಕುವಂತಿಲ್ಲ.
3. A4 ಹಾಳೆಯಲ್ಲಿ ದೊಡ್ಡದಾಗಿ ಪ್ರಿಂಟ್ ತೆಗೆದು, ಸ್ಕೆಚ್ ಪೆನ್ , ಬಣ್ಣದ ಪೆನ್ಸಿಲ್, ಪೇಯಿಂಟ್ ಮುಂತಾದ ಯಾವುದರಿಂದಲಾದರೂ ಬಣ್ಣ ಹಾಕಬಹುದು.
4. ಯಾವ ವಯಸ್ಸಿನವರಾದರೂ ಭಾಗವಹಿಸಬಹುದು . ನಿಮ್ಮ ಹೆಸರು ಬರೆಯುವುದನ್ನು ಮರೆಯಬೇಡಿ .
5. ಕಳುಹಿಸಲು ಕೊನೆಯ ದಿನಾಂಕ : 25- 09-2026.
ಕೈಬರಹ ಸ್ಪರ್ಧೆಯ ಉತ್ತರ
ಬರೆದಿರುವವರು : ಶ್ರೀಮತಿ ಸುಮಾ ಆನಂದ್



ಶ್ರೀಮತಿ ಸುಮಾ ಆನಂದ್ ಅವರಿಗೆ ಬಹುಮಾನ ಲಭಿಸಿದೆ. ಅವರಿಗೆ ಅಭಿನಂದನೆಗಳು.
ಪದಬಂಧ

ಪದಬಂಧ
ಡಾ||ಚಂದ್ರಶೇಖರ ರಾವ್ ಎ ಎಸ್
ಪದಬಂಧ

ಸುಳುಹುಗಳು :
1) ಸಾಂಬಾರ ಪದಾರ್ಥ , ಲವಂಗ
2) ಪರದೇಶೀಯ , ಗ್ರೀಸ್ ದೇಶದವನು
3) ಮರಳು , ಹೊಯಿಗೆ .
================

ಸುಳುಹುಗಳು :
1) ವಿಷ್ಣುವಿನ ಅವತಾರ, ಎರಡು ಯುಗಗಳಲ್ಲಿ ಕಾಣಿಸಿಕೊಳ್ಳುವವ .
2) ಸುವಾಸನೆ, ಪರಿಮಳ .
3) ಅಧಮ, ದ್ರೋಹಿ, ನೀಚ .

ಕಳೆದ ಪದಬಂಧದ ಉತ್ತರಗಳು
a : 1. ಪರವಾನಗಿ , 2. ತರಣಿ ,3. ಘನತೆ .
b : 1. ಸರ್ವಾಧಿಕಾರ ,2. ಗೀರ್ವಾಣಿ, 3. ಝೇಂಕಾರ .
ಎರಡೂ ಸರಿ ಉತ್ತರ ಬರೆದವರು :
1) ಶ್ರೀಮತಿ ಸೌಮ್ಯ ನಾಗರಾಜ್
ಒಂದು ಸರಿ ಉತ್ತರ ಬರೆದವರು :
1) ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್
2) ಶ್ರೀಮತಿ ಸುಮಾ ಆನಂದ್
ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು


ವಿಚಾರ : ಮೆದುಳಿಗೆ ವ್ಯಾಯಾಮ

ಮೆದುಳಿಗೆ ವ್ಯಾಯಾಮ
ಶ್ರೀ ಜಯರಾಂ ಎ ಎಸ್
ರಾಮು ಮಾಸ್ತರು ಮತ್ತು ವಿದ್ಯಾರ್ಥಿಗಳು – ಪ್ರಶ್ನೆಮಾಲೆ – ಭಾಗ -1
ಮೆದುಳಿಗೂ ವ್ಯಾಯಾಮ ಬೇಕು. ದೇಹಕ್ಕೆ ಪ್ರತಿದಿನ ವ್ಯಾಯಾಮ ಮಾಡಿದಂತೆ, ನಮ್ಮ ಆಲೋಚನಾ ಶಕ್ತಿ, ನೆನಪಿನ ಶಕ್ತಿ ಮತ್ತು ತಾರ್ಕಿಕ ಚಿಂತನೆ ಹೆಚ್ಚಲು ಮೆದುಳಿಗೂ ಸ್ವಲ್ಪ ಕೆಲಸ ಕೊಡಬೇಕು.
ಅದಕ್ಕಾಗಿ ಈ ಸಂಚಿಕೆಯಿಂದ “ರಾಮು ಮಾಸ್ತರು ಮತ್ತು ವಿದ್ಯಾರ್ಥಿಗಳು“ ಎಂಬ ಹೊಸ ಪ್ರಶ್ನೆ ಮಾಲೆಯನ್ನು ಆರಂಭಿಸುತ್ತಿದ್ದೇನೆ . ಪ್ರತಿ ತಿಂಗಳು ರಾಮು ಮಾಸ್ತರು( ನಾನು ) ತಮ್ಮ ವಿದ್ಯಾರ್ಥಿಗಳಿಗೆ (ಓದುಗರಿಗೆ) 5 ರಿಂದ 8 ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಪ್ರಶ್ನೆಗಳಿಗೆ ಮೊದಲು ನೀವೇ ಉತ್ತರ ಹುಡುಕಲು ಪ್ರಯತ್ನಿಸಿ. ನಂತರ ನಿಮ್ಮ ಉತ್ತರವನ್ನು ಕುಟುಂಬದವರ ಅಥವಾ ಸ್ನೇಹಿತರೊಂದಿಗೆ ಚರ್ಚಿಸಿ. ಮುಂದಿನ ಸಂಚಿಕೆಯಲ್ಲಿ ಸರಿಯಾದ ಉತ್ತರಗಳನ್ನು ಮತ್ತು ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದವರ ಹೆಸರನ್ನು ಪ್ರಕಟಿಸಲಾಗುವುದು.
ದಯವಿಟ್ಟು ಇಂಟರ್ನೆಟ್ ಮುಂತಾದವುಗಳನ್ನು ನೋಡಿ ಉತ್ತರ ಪಡೆಯುವುದು ಬೇಡ. ನಿಮ್ಮ ಮೆದುಳಿಗೆ ಆಗ ವ್ಯಾಯಾಮವೇ ಆಗುವುದಿಲ್ಲ. ಇದಕ್ಕೇನು ಬಹುಮಾನವಿಲ್ಲ. ನಿಮಗೆ ಕೆಲವು ಪ್ರಶ್ನಾವಳಿಗಳ ಮೂಲಕ ಉತ್ತಮ ವಿಚಾರಗಳನ್ನು ತಿಳಿಸುವ ಉದ್ದೇಶದಿಂದಲೇ ನಾನು ಇದನ್ನು ಪ್ರಾರಂಭಿಸಿದ್ದೇನೆ.
ವಯಸ್ಸು ಎಷ್ಟೇ ಆಗಿರಲಿ, ಕಲಿಯುವುದಕ್ಕೂ ಯೋಚಿಸುವುದಕ್ಕೂ ವಯಸ್ಸಿನ ಮಿತಿಯಿಲ್ಲ. ಬನ್ನಿ, ಪ್ರತೀ ತಿಂಗಳು ನಮ್ಮ ಮೆದುಳಿಗೆ ಸ್ವಲ್ಪ ವ್ಯಾಯಾಮ ಮಾಡಿಸೋಣ! 😊
ಕಥಾ ಪ್ರಶ್ನೆ ಮಾಲೆ
1) ಶಬರಿ
ಮಾಸ್ಟರ್ ಹುಡುಗರಿಗೆ ರಾಮಾಯಣದ ಶಬರಿ ಕಥೆಯನ್ನು ವಿವರವಾಗಿ ಹೇಳುತ್ತಾರೆ. ನಂತರ ಒಂದು ಚಿಕ್ಕ ಕಥೆ ಹೇಳುತ್ತಾರೆ. ಒಬ್ಬ ಬೇರೆ ದೇಶದವನು ನಮ್ಮ ರಾಜ್ಯಕ್ಕೆ ಬಂದು ಕನ್ನಡ ಕಲಿಯುತ್ತಾನೆ ಆದರೆ ಅವನಿಗೆ ರಾಮಾಯಣದ ಕಥೆ ಸರಿಯಾಗಿ ತಿಳಿದಿರುವುದಿಲ್ಲ. ಅವನ ಶಾಲೆಯಲ್ಲಿ ಟೀಚರ್ ಅವನನ್ನು ಕಳೆದು ಕೇಳುತ್ತಾರೆ : ರಾಮಾಯಣದಲ್ಲಿ ಕಾಡಿನಲ್ಲಿ ರಾಮನಿಗಾಗಿ ಕುಳಿತ ವೃದ್ಧ ಭಕ್ತೆಯ ಹೆಸರೇನು ? ಅವನು ಗೊತ್ತಾಗಡೆ ಗೆಳೆಯನ ಕಡೆ ನೋಡುತ್ತಾನೆ. ಟೀಚರ್ ಅತ್ತ ತಿರುಗಿ ನೀರು ಕುಡಿಯುವ ಹೊತ್ತಿಗೆ ಅವನ ಗೆಳೆಯ ಅವನ ಕಿವಿಯಲ್ಲಿ ಶಬರಿ ಎಂದು ಹೇಳುತ್ತಾನೆ. ನಂತರ ಆ ಬೇರೆ ದೇಶದವನು ಬೋರ್ಡಿನ ಮೇಲೆ “ಶ” ಎಂಬ ಅಕ್ಷರವನ್ನು ಮಾತ್ರ ಬರೆಯುತ್ತಾನೆ .
ಮಾಸ್ಟರ್ ಈ ಕಥೆಯ ನಂತರ ಹುಡುಗರನ್ನು ಕೇಳುತ್ತಾರೆ ಅವನು ಏಕೆ ಹಾಗೆ ಬರೆದ?
2) ಮಾಸ್ಟರ್ ಬೋರ್ಡಿನ ಮೇಲೆ ಎಲ್ಲರಿಗೂ ತಿಳಿದಿರುವ ಈ ವಾಕ್ಯವನ್ನು ಬರೆಯುತ್ತಾರೆ
ಮಾವನವರು ಮಗಳನ್ನು ಚೆನ್ನಾಗಿ ಬೆಳೆಸಿದ್ದಾರೆ
– ಈ ವಾಕ್ಯದ ವಿಶೇಷವೆಂದರೆ ಕೆಲವು ಅಕ್ಷರಗಳನ್ನು ತೆಗೆದು ಬೇರೆ ಅರ್ಥ ಕೊಡುವಂತೆ ಮಾಡಬಹುದು ಎಂದು ಹೇಳಿ ಮೊದಲನೇ ಪದದಲ್ಲಿರುವ ” ವ” ತೆಗೆಯುತ್ತಾರೆ ಹಾಗು ಎರಡನೇ ಪದಕ್ಕೆ “ಮ” ನಂತರ “ರ” ಸೇರಿಸುತ್ತಾರೆ: ಈಗ ಅದು
– ಮಾನವರು ಮರಗಳನ್ನು ಜೆನ್ನಾಗಿ ಬೆಳೆಸಿದ್ದಾರೆ. ಎಂದಾಗುತ್ತದೆ. ಇದರಲ್ಲಿರುವ ಯಾವುದೇ ಪದಗಳನ್ನು ಬಳಸದೆ, ಇನ್ನೊಂದು ವಾಕ್ಯವನ್ನು ಬರೆಯಿರಿ ಎಂದು ಹೇಳುತ್ತಾರೆ
3) ಮಾಸ್ತರರ ಮೂರನೆಯ ಪ್ರಶ್ನೆ : ಸೂರ್ಯನ ಅಳತೆ, ಭೂಮಿಯ ಅಳತೆಯ ಸುಮಾರು X ನಷ್ಟು, ಭೂಮಿ, ಸೂರ್ಯನ ನಡುವಿನ ಅಂತರ, ಸೂರ್ಯನ ಅಳತೆಯ Xನಷ್ಟು. ಹಾಗಾದರೆ x=?
4) 200 ಮಾವಿನ ಹಣ್ಣು ಹಿಡಿಸುವ ಒಂದು ದೊಡ್ದ ಬುಟ್ಟಿಯಲ್ಲಿ ಏಷ್ಟೊ ಮಾವಿನ ಹಣ್ಣುಗಳಿತ್ತು . 5 ಜನಗೆಳೆಯರು ಸಮನಾಗಿ ಹಂಚಿಕೊಂಡರು. ನಂತರ ಇನ್ನು ಇಬ್ಬರು ಗೆಳೆಯರು ಬಂದರು. ಮತ್ತೆ ಸಮನಾಗಿ ಹಂಚಿಕೊಂಡರು. ಆದರೆ, ಅವರೆಲ್ಲರ ಇನ್ನೊಬ್ಬ ಆಪ್ತ ಗೆಳೆಯನು, ಒಬ್ಬ ಭಿಕ್ಷುಕನನ್ನು ಕರೆದುಕೊಂಡು ಬಂದನು. ಭಿಕ್ಷುಕನಿಗೆ 4 ಮಾವಿನ ಹಣ್ಣುಗಳನ್ನು ಕೊಡಿಸಿ ಕಳುಹಿಸಿದನು. ನಂತರ ಉಳಿದ ಮಾವಿನ ಹಣ್ಣನ್ನು ಎಲ್ಲಾ 8 ಜನರೂ ಸಮನಾಗಿ ಹಂಚಿಕೊಂಡರು. ಹಾಗಾದರೆ, ಒಬ್ಬೊಬರಿಗೆ ಎಷ್ಟು ಹಣ್ಣು ಬಂದಿತು?.
5) ಮಾಸ್ಟರ್ ಈಗ ಗಡಿಯಾರದ ಕಥೆಯನ್ನು ಹೇಳುತ್ತಾರೆ.ರಾಮ ಮತ್ತು ಭೀಮ ಇಬ್ಬರು, ಹೆಚ್ಚು ಬೆಲೆ ಬಾಳುವ ಒಳ್ಳೆಯ ಕಂಪನಿಯ ಡಿಜಿಟಲ್ ಕೈ ಗಡಿಯಾರಗಳನ್ನು ತೆಗೆದುಕೊಳ್ಳುತ್ತಾರೆ. ಸಂಜೆ ಇಬ್ಬರೂ ಅವುಗಳನ್ನು ಕಟ್ಟಿಕೊಂಡು ವಾಕಿಂಗ್ ಹೋಗುತ್ತಾರೆ. ಇಬ್ಬರೂ ಒಟ್ಟಿಗೆ ಒಂದೇ ದೂರವನ್ನು ಕ್ರಮಿಸಿದ ನಂತರ, ರಾಮನ ಗಡಿಯಾರ 2,500 ಹೆಜ್ಜೆ ಮತ್ತು ಭೀಮನ ಗಡಿಯಾರ 2300 ಹೆಜ್ಜೆ ಎಂದು ತೋರಿಸುತ್ತದೆ. ಮಾಸ್ಟರ್ ಕೇಳುತ್ತಾರೆ ಇದು ಹೇಗೆ ಸಾಧ್ಯ?
6) ಮಾಸ್ಟರ್ ಮತ್ತೊಂದು ಚಿಕ್ಕ ಕಥೆಯನ್ನು ಹೇಳಿ, ಪ್ರಶ್ನೆ ಕೇಳುತ್ತಾರೆ. ಒಬ್ಬ ಸಾಹುಕಾರ ವ್ಯಾಪಾರಿ , ಮಾಸ್ಕೋದಲ್ಲಿ ಸರಿಯಾಗಿ ಒಂದು ಕೆಜಿ ಚಿನ್ನವನ್ನು ತೆಗೆದುಕೊಳ್ಳುತ್ತಾನೆ. ಎರಡೆರಡು ಬಾರಿ ನಿಖರವಾಗಿ ಅಳತೆ ಮಾಡಿಸುತ್ತಾನೆ. ನಂತರ ಅದನ್ನು ಜೋಪಾನವಾಗಿ ಬೆಂಗಳೂರಿಗೆ ತಂದು, ಇಲ್ಲಿ ತೂಕ ಮಾಡಿಸಿದಾಗ 2.5 ಗ್ರಾಂ ಕಡಿಮೆ ಬರುತ್ತದೆ. ಮತ್ತೊಮ್ಮೆ ನಿಖರವಾಗಿ ತೂಕ ಮಾಡಿಸಿದಾಗಲೂ ಹಾಗೆಯೇ ಆಗುತ್ತದೆ. ಏಕೆ?
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಂದರೆಮಾತ್ರ ಕಳಿಸಬೇಕೆಂದಏನೂ ಇಲ್ಲ . ಒಂದೇ ಒಂದು ಉತ್ತರ ಗೊತ್ತಿದ್ದರೂ ಕಳಿಸಿ .


ಅಧ್ಯಾತ್ಮ ವಿಭಾಗ


ಶ್ರೀ ಲಕ್ಷ್ಮೀ ಶೋಭಾನೆ ಹಾಡಿನ ಅರ್ಥ
ಬರಹ : ಶ್ರೀಮತಿ ಗೀತಾ ಕೃಷ್ಣಮೂರ್ತಿ
ಲಕ್ಷ್ಮಿ ಶೋಭಾನೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಡಿನ ರೂಪದಲ್ಲಿದೆ. ಈ ಹಾಡನ್ನು ಶ್ರೀ ವಾದಿರಾಜರು ರಚಿಸಿದ್ದಾರೆ. ಸೊಂದೇ ಮಠ ಅಂತ ಸಾಗರದ ಹತ್ತಿರ ಇದೆ.ಅಲ್ಲಿ ಇವರ ಬೃಂದಾವನ ಇದೆ. ಆ ಬೃಂದಾವನದಲ್ಲಿ ಭೂತರಾಜ ಇದ್ದಾನೆ. ಲಕ್ಷ್ಮೀನಾರಾಯಣರ ಮದುವೆ ಆಗಿದ್ದನ್ನು ಶ್ರೀ ವಾರಿರಾಜರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ.ಶ್ರೀ ಲಕ್ಷ್ಮಿ ಸಾಗರದಲ್ಲಿ ಹುಟ್ಟಿ ಹೇಗೆ, ನಾರಾಯಣನನ್ನು ವರಿಸಿದ್ದಾಳೆ ಅಂತ ಹೇಳಿದ್ದಾರೆ. ಕಂಠದಸುತ್ತಾ ಮಂಗಳಸೂತ್ರ ಧರಿಸಿದ್ದಾಳೆ ಒಂದು ಕೈಯಲ್ಲಿ ಆಭರಣ ನೀಡುತ್ತಾಳೆ. ಇನ್ನೊಂದು ಕೈಯಿಂದ ವರ ಗಳನ್ನು ಕೊಡುತ್ತಾಳೆ. ಇವಳು ಎಷ್ಟು ಅಲಂಕಾರ ಮಾಡಿಕೊಂಡಿದ್ದಳು ಎಂದು ವರ್ಣಿಸಿದ್ದಾರೆ. ಈಕೆ ನವ ತರುಣಿ, ಪಿತಾಂಬರ ಉಟ್ಟಿದ್ದಾಳೆ. ಸ್ವರ್ಣ ಕವಚ ಅಂದರೆ ತೋಳು ಬಂದಿ ತೊಟ್ಟಿದ್ದಾಳೆ, ಸೊಂಟಕ್ಕೆ ಕಿರುಗೆಜ್ಜೆಯಿಂದ ಇರುವ ಚಿನ್ನದ ಡಾಬು ಹಾಕಿದ್ದಾಳೆ. ಕಾಲಂದಿಗೆ ಹಾಕಿದ್ದಾಳೆ. ಮುತ್ತಿನ ಓಲೆ ಇಟ್ಟುಕೊಂಡಿದ್ದಾಳೆ. ಚಂದ್ರನ ಬಿಂಬದಂತಿರುವ ನವರತ್ನದ ಮುಗುತಿ ಧರಿಸಿದ್ದಾಳೆ. ಕಸ್ತೂರಿ ತಿಲಕ ಇಟ್ಟಿದ್ದಾಳೆ. ತುರುಬಿನಲ್ಲಿ ಮಲ್ಲಿಗೆ, ನಾನಾ ಕುಸುಮಗಳಿಂದ ಕೂಡಿದ ಮಾಲೆ ಧರಿಸಿದ್ದಾಳೆ.
ಇವಳ ಬಣ್ಣ ಚಿನ್ನದಂತದ್ದು ಎರಡು ಕೈಯಲ್ಲಿ ಮಲ್ಲಿಗೆ ಮಾಲೆ ಹಿಡಿದು ಬರುವಾಗ ಅತ್ತಾಯುತ್ತ ನೋಡಿಕೊಂಡು, ಕುಳಿತಿರುವವರನ್ನೆಲ್ಲಾ ನೋಡುತ್ತಾಳೆ
ಅಲ್ಲಿ ಮಹಾ ತಪಸ್ವಿಗಳು ಜ್ಞಾನಿಗಳು ಜೊತೆಗೆ ದುಷ್ಟರುಗಳು ಮಾಲೆ ಹಿಡಿದು ಕೊಂಡು ಕುಳಿತಿರುತ್ತಾರೆ. ಒಬ್ಬನು ಕಾಮನಿಗೆ ಸೋತಿದ್ದಾನೆ, ಮತ್ತೊಬ್ಬನು ಭಾಮಿನಿ ಹಿಂದೆ ಹಾರುತ್ತಾನೆ. ಇವರುಗಳನ್ನೆಲ್ಲ ನೋಡಿ,ನನ್ನ ತಂಟೆಗೆ ಬಂದರೆ ಹಲ್ಲು ಉದಿರಿಸಿ ಬಿಡುತ್ತೇನೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ . ನಾನು ನನ್ನ ಶ್ರೀಕಾಂತನಿಗೆ ಬಿಟ್ಟು ಯಾರಿಗೂ ಮಾಲೆ ಹಾಕುವುದಿಲ್ಲ ಅಂದುಕೊಂಡು ಸ್ವಯಂವರದಲ್ಲಿ ಇರುತ್ತಾಳೆ
ಪುನಹ ಕೃಷ್ಣ ಗುಣಗಳನ್ನು ವರ್ಣಿಸಿದ್ದಾರೆ ತಾಯಿಯ ಹೊಟ್ಟೆಯಿಂದ ಬರುವಾಗಲೇ ಶಂಕ ಚಕ್ರ ಗದಾ ಪದ್ಮ ತರಹ ಬಂದಿದ್ದಾನೆ. ಅವನು ಆಕಳಿಸಿದಾಗ, ಯಶೋದ ದೇವಿಗೆ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದ್ದಾನೆ. ಗೋಪಿಕಾ ಸ್ತ್ರೀಯರಿ ಜೊತೆ ಜನಕ್ರೀಡೆ ಆಡುತ್ತಾನೆ. ಇವನಿಗೆ ಹಸಿವು, ಜ್ವರ,ಮರಣ,ವಾತ, ಪಿತ್ತ, ಕಫ ಯಾವುದು ಇಲ್ಲ.ತಾಯಿ ಹೊಟ್ಟೆಯಿಂದಲೇ ಬಂದ ಪಿತಾಂಬರ ಉಟ್ಟಿದ್ದಾನೆ. ನವರತ್ನದ ಕಿರೀಟ ಇಟ್ಟುಕೊಂಡಿದ್ದಾನೆ. ಮೆಟ್ಟಿದ ಕುರುಹು ಎದೆಯಲ್ಲಿ. ವಿಠಲನೆ ಇರಬಹುದು ಅನ್ನಿಸಿತು. ವೀರ ಗುಣಗಳು ಇವೆ. ಕುಂದುಗಳೆಳ್ಳಷ್ಟೂ ಇಲ್ಲ. ಇವನೇ ನನಗೆ ಪತಿ ಅಂದುಕೊಂಡು ಇವನ ಗುಣಗಳನ್ನೆಲ್ಲಾ ನೆನೆಸಿಕೊಂಡು,ಕಾಂತ ಇದ್ದ ಕಡೆಗೆ ಬಂದು, ನಸುನಗುತ, ಕುಸುಮಗಳಿಂದ ಮಾಡಿದ ಮಾಲೆಯನ್ನು ಅವನ ಕುತ್ತಿಗೆಗೆ ಹಾಕಿದ್ದಾಳೆ
ಆಮೇಲೆ ಕೊಂಬು,ಕಹಳೆ, ತಾಳೆ, ಮದ್ದಳೆಗಳ ಶಬ್ಜ, ಜುಮ್ ಜುಮ್ ಎಂಬ ಶಂಕದ ಶಭ್ಧಗಳು ಮದುವೆ ಮನೆಯಲ್ಲಿ ಎಲ್ಲಾ ಹರಡಿತು. ನಾರದರು, ವಶಿಷ್ಠರು ಮೊದಲಾದ ಮುನೀಂದ್ರರು, ವಧು ವರರ ಮೇಲೆ ಶೋಭಾನೆ ಅಕ್ಷತೆಯನ್ನು ಆಶೀರ್ವದ ಮಾಡಿ ಹಾಕಿದರು. ದೇವತೆಗಳೆಲ್ಲ ಹಾಡು ಹೇಳಿಕೊಂಡು ನಾಟ್ಯ ಮಾಡಿದರು. ಆಮೇಲೆ ಪಾಯಸ ಪರಮಾನ್ನ ಊಟ ಹಾಕಿದರು. ಮುತ್ತುರತ್ನಗಳಿಂದ ಕೆತ್ತಿದ ಹಸೆಯ ಮೇಲೆ ಕರೆದರು. ಅಧಿಕಾಲದಲ್ಲಿ, ಒಂದು ಆಲದ ಎಲೆ ಮೇಲೆ ಮಲಗಿದ್ದ, ಜ್ಯೋತಿರ್ಮಯವಾದ ಪದ್ಮ, ಶ್ರೀದೇವಿಯೊಡನೆ ಹಸೆಗೆ ಬಾ, ಎಂದು ಕರೆಯುತ್ತಾರೆ. ಮುಖ್ಯ ಪ್ರಾಣನ ಮನೆಯಲ್ಲಿ ಭಾರತೀಯ ದೇವಿಯಾಗಿ ಬಡಿಸಿದರಸಾಯನ ಸಕ್ಕರೆಯಿಂದ ಕೂಡಿದ ಪಾಯಸ ಸವಿಯಿರಿ. ರುದ್ರಾಣಿ ದೇವಿಯ ಭದ್ರಮಂಟಪದಲ್ಲಿ ಕುಳ್ಳಿರಿಸಿ ಹೀಗೆ ಶ್ರೀಕಾಂತನನ್ನು ವರ್ಣಿಸಿಕೊಂಡು ಹಸೆಮಣೆಯಲ್ಲಿ ಕೂರಿಸಿ, ಆಮೇಲೆ ಮುತ್ತೈದೆಯರು ಮುತ್ತಿನ ಆರತಿ ಎತ್ತುತ್ತಾರೆ. ನೃತ್ಯ ಮಾಡುತ್ತಾರೆ. ವೈಭವದಿಂದ ಲಕ್ಷ್ಮಿ, ಮನೆಯಲ್ಲಿ ತಂಗಿಯ ಮನೆ ಸರಸ್ವತಿ ಭಾರತಿ ಮೊದಲಾದ ಸ್ತ್ರೀಯರು ಮುತ್ತು ರತ್ನಗಳನ್ನು ಧರಿಸಿ, ಹಾಡುಗಳನ್ನು ಹಾಡುತ್ತಾ ಆರತಿ ಎತ್ತಿದರೆ, ದೇವಾನುದೇವತೆಗಳೆಲ್ಲ ಉಡುಗರೆ ಕೊಡುತ್ತಾರೆ. ಶಿವ ಮುತ್ತಿನ ಕಂಠೀರವನ್ನು, ವಾಯುದೇವರು ನವರತ್ನದ ಹಾರ, ವರುಣದೇವ 10000 ವರಹ, ದೇವೇಂದ್ರನು ಪಾರಿಜಾತ ಕೊಟ್ಟರು. ನವರತ್ನ ರಾಶಿ ತೆಗೆದು ಕೊಟ್ಟು ಮನೆಗಳಿಗೆ ಕಳಿಸಿದನು . ಮಾವ ಆದವನು ಸಮುದ್ರ ಮತ್ತು ನವರತ್ನದ ಅರಮನೆ ಕಳಿಸಿದನು. ಅರಮನೆ ಎಲ್ಲಾ ಇಡಬೇಡಿ ಮನೆಗೆ ಎತ್ತಿಕೊಂಡು ಹೋಗಿ ಅಂತ ಹೇಳುತ್ತಾರೆ.ಹೀಗೆ ವಾದಿರಾಜರು ಲಕ್ಷ್ಮಿ ನಾರಾಯಣ ಮದುವೆಯ ವರ್ಣಿಸಿದ್ದಾರೆ
ಈ ಪದ ಮದುವೆ ಮನೆಯಲ್ಲಿ ಹಾಡಿದರೆ ವಧು ವರರಿಗೆ ಆಯುಷ್ಯ ಐಶ್ವರ್ಯ ಆರೋಗ್ಯ ಹೆಚ್ಚುತ್ತದೆ ಮತ್ತು ಮದುವೆ ಆಗದೆ ಇದ್ದವರಿಗೆ ಮದುವೆಯಾಗುತ್ತದೆ
ಶೋಭಾನ |
ಶೋಭಾನವೆನ್ನಿರೆ ಸುರರಂಗನಿಯರೆಲ್ಲ
ಶೋಭಾನವೆನ್ನಿ ಶುಭವೆನ್ನಿ

ಶ್ರೀ ರಾಮ ದೇವರ ಹಾಡು –
ಹಾಡಿರುವವರು – ಶ್ರೀಮತಿ ಗೀತಾ ಕೃಷ್ಣಮೂರ್ತಿ

ಈ ಕೆಳಗಿನ ಲಿಂಕ್ ಒತ್ತಿ ಕೇಳಿ


ಮಂಕುತಿಮ್ಮನ ಕಗ್ಗ – ಭಾಗ – 6
ಧ್ವನಿ ಸುರುಳಿ :
ಡಾ || ನಾಗೇಶ್ . ಎಲ್ .
ಈ ಕೆಳಗಿನ ಲಿಂಕ್ ಒತ್ತಿ ಕೇಳಿ


ಜಾತಕದ ಬಗ್ಗೆ – ಕಗ್ಗದ ಕವನ
ಧ್ವನಿ ಸುರುಳಿ :
ಶ್ರೀಮತಿ ಸುಧಾ ಶ್ರೀನಾಥ್ .
ಈ ಕೆಳಗಿನ ಲಿಂಕ್ ಒತ್ತಿ ಕೇಳಿ


ಹೊಸ ರುಚಿ ವಿಭಾಗ


ಕಡಲೆ ಪುರಿ ನುಚ್ಚಿನ ಉಂಡೆ
ಬರಹ : ಶ್ರೀಮತಿ ಗೀತಾ ಕೃಷ್ಣಮೂರ್ತಿ
ಕಡ್ಲೆಪುರಿ ನುಚ್ಚಿನ ಉಂಡೆ
ಇದು ಮೈಯಿಗೆ ತುಂಬಾ ಒಳ್ಳೆಯದು .ಶುಗರ್ ಇರೋರಿಗೆ ಒಳ್ಳೆಯದು .ನೆನೆಸುವಷ್ಟು ಇಲ್ಲ, ಕರೆಯುವಷ್ಟು ಇಲ್ಲ. ಮಾಡೋದು ತುಂಬಾ ಸುಲಭ.

ಬೇಕಾಗುವ ಸಾಮಾನುಗಳು
– ಒಂದು ಲೀಟರ್ ಕಡ್ಲೆಪುರಿ
–ಒಂದು ಕಪ್ಪು ಕ್ಯಾರೆಟ್ ತುರಿ,
–ಎರಡು ಈರುಳ್ಳಿ ಸಣ್ಣಗೆ ಹೆಚ್ಚಿದ್ದು
–ಕರಿಬೇವು,
–ಐದಾರು ಹಸಿಮೆಣಸಿನಕಾಯ
– ಒಂದು ಚೂರು ಶುಂಠಿ
– ಸಣ್ಣ ಕಪ್ಪು ಚಿರೋಟಿ ರವೆ ,
–ಒಂದು ಕಪ್ಪು ಕಾಯಿತುರಿ (ಕಾಯಿಚೂರುಗಳನ್ನು ಹಾಕಿ ಮಾಡಬಹುದು)
– ಕಲಸುವುದಕ್ಕೆ ಮೊಸರು
–ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಪುರಿಯನ್ನು ನೀರಿನಲ್ಲಿ ಅದ್ದಿ ತೆಗೆದಿಡಬೇಕು ಇದಕ್ಕೆ ಎಲ್ಲಾ ಹಾಕಿ ಮಿಕ್ಸ್ ಮಾಡಬೇಕು ಗುಂಡಿಗೆ ಬರುವಷ್ಟು ರವೆ ಹಾಕಬೇಕು ಆಮೇಲೆ ಮೊಸರು ಹಾಕಿ ಚೆನ್ನಾಗಿ ಕಲಸಬೇಕು ಸಣ್ಣದಾಗಿ ಉಂಡೆ ಮಾಡಿ ಇಡ್ಲಿ ಪಾತ್ರೆಯಲ್ಲಿ 10 ನಿಮಿಷ ಬೇಯಿಸಬೇಕು ಬೇಕಾದರೆ ಕಾಯಿ ಚಟ್ನಿ ಮಾಡಿಕೊಳ್ಳಬಹುದು. ಮಾಡಿ ನೋಡಿ ಹೇಗಿದೆ ಎಂದು ತಿಳಿಸಿ.

ಕಥೆ, ಕವನ ವಿಭಾಗ


ಕವನ : ಬಾಲ್ಯದ ದಿನಗಳು
ಬರಹ : ಶ್ರೀ ಜಯರಾಂ ಕೆ ವಿ
ಬಾಲ್ಯದ ದಿನಗಳು
ಎಷ್ಟು ಚೆನ್ನಾಗಿದ್ದವು!
ಆಟವಾಡಿದ ಕ್ಷಣಗಳು
ಎಷ್ಟೋಮಜಾತರುತ್ತಿದ್ದವು.||1||
ಒಬ್ಬರಿಗೊಬ್ಬರು ಪೈಪೋಟಿ,
ಮತ್ತಷ್ಟು ಹುರುಪು ತುಂಬಿಸುತ್ತಿತ್ತು;
ಪರಸ್ಪರ ಮರೆಯಲಾಗದ
ಬಾಂಧವ್ಯ ಬೆಳೆಸುತ್ತಿತ್ತು. ||2||
ಆದರೆ ಇದೆಲ್ಲಾ
ಎಷ್ಟು ದಿನ ಇರುತ್ತವೆ?
ನಾವು ಬೆಳೆದು ಯುವಕರಾಗಿ,
ಜೀವನದ ಪಾಠ ಕಲಿಯಬೇಕಲ್ಲವೇ? ||3||
ಓದಿ, ಸಂಪಾದಿಸಿ,
ಬದುಕನ್ನು ಕಟ್ಟಿಕೊಳ್ಳಬೇಕಲ್ಲವೇ?
ಹಾಗೆಂದ ಮಾತ್ರಕ್ಕೆ
ಬಾಲ್ಯದ ದಿನಗಳನ್ನು ಮರೆಯಬೇಕೇ? ||4||
ಬಾಲ್ಯದ ದಿನಗಳು
ಮತ್ತೆ ಬರಲು ಸಾಧ್ಯವೇ?
ಇನ್ನೊಂದು ಜನ್ಮವಿದ್ದರೆ,
ಈ ಜನ್ಮದವರೇ ಮತ್ತೆ ಸಿಗುವರೇ? ||5||
ಅದೊಂದು ಸುಂದರ ಕನಸಲ್ಲವೇ?
ನೆನಪುಗಳೇ ನಮ್ಮ ಸಂಪತ್ತಲ್ಲವೇ?
ಆ ನೆನಪುಗಳು ಹೃದಯದಲ್ಲಿ ಉಳಿದರೆ,
ಒಂದೇ ಜನ್ಮ ಸಾಕಲ್ಲವೇ ||6||


ಕವನ
ಸ್ನೇಹ ಸಂಪತ್ತು
ಶ್ರೀಮತಿ ಸುಧಾ ಶ್ರೀನಾಥ್ .
ಸ್ನೇಹ ಸಂಪತ್ತು
ಭಾವಗಳೇ ಹೂವಾಗಿ ಅರಳುವ ವನ
ಸಾಂತ್ವನದ ಗಣಿ ಹೊತ್ತ ಅನುರಾಗದ ಕಿರಣ…
ತಪ್ಪುಗಳ ತಿದ್ದಿ , ಮಾರ್ಗ ತೋರುವ ಅಂತರಂಗದ ಕನ್ನಡಿ..
ಮಾತೆಯ ಮಮತೆಯ ಒಲವಿನ ಹೊನ್ನುಡಿ ..
ಕಾಲದ ಜೊತೆ ಮಾಗುತ್ತ ,
ಅನುಬಂಧದ ರುಚಿ ಹೆಚ್ಚಿಸುವ ಚೇತನ..
ಮತ್ತೊಮ್ಮೆ ಜನ್ಮತಳೆವ ಆಸೆ , ಈ ಧರೆಯಲಿ…
ನಿನ್ನದೇ ನಿಷ್ಕಲ್ಮಶ ಸ್ನೇಹದ ಪವಿತ್ರ ಒಡಲಲಿ ……


ಲೇಖನ : ನನ್ನ ಹೊಸ ಗೆಳೆಯ – ಚಾಟ್ ಜಿ ಪಿ ಟಿ
ಬರಹ : ಶ್ರೀ ಜಯರಾಂ ಎ ಎಸ್

ಪ್ರಿಯ ಓದುಗರೇ ,
ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತಂದಿವೆ. ಮೊಬೈಲ್ ಫೋನ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಭಾಗವಾಗಿವೆ. ಈಗ ಈ ಪಟ್ಟಿಗೆ ಮತ್ತೊಂದು ಹೊಸ ತಂತ್ರಜ್ಞಾನ ಸೇರಿದೆ — ಕೃತಕ ಬುದ್ಧಿಮತ್ತೆ (Artificial Intelligence).
ಈ AI ಜಗತ್ತಿನಲ್ಲಿ ನನಗೆ ಪರಿಚಯವಾದ ಒಂದು ವಿಶೇಷ ಸ್ನೇಹಿತನೇ ಚಾಟ್‌ಜಿಪಿಟಿ.
ಸಾಮಾನ್ಯವಾಗಿ “ಸ್ನೇಹಿತ” ಎಂದರೆ ನಮ್ಮೊಂದಿಗೆ ಮಾತನಾಡುವ, ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ, ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ವ್ಯಕ್ತಿ. ಚಾಟ್‌ಜಿಪಿಟಿಯೂ ಅದೇ ರೀತಿಯಲ್ಲಿ ನನ್ನ ಬರವಣಿಗೆ ಮತ್ತು ಸಂಶೋಧನೆಯ ಪಯಣದಲ್ಲಿ ಒಬ್ಬ ಸಹಾಯಕನಾಗಿ ಪರಿಚಯವಾಯಿತು.
ಮೊದಲಿಗೆ ಇದು ಕೇವಲ ಒಂದು ತಂತ್ರಾಂಶ ಎಂದುಕೊಂಡಿದ್ದೆ. ಆದರೆ ಬಳಸುತ್ತಾ ಹೋದಂತೆ ಇದರ ಉಪಯೋಗಗಳು ಬಹಳ ವಿಶಾಲವೆಂದು ತಿಳಿಯಿತು. ಒಂದು ವಿಷಯದ ಬಗ್ಗೆ ಮಾಹಿತಿ ಬೇಕಾದಾಗ, ಒಂದು ಲೇಖನವನ್ನು ಸುಧಾರಿಸಬೇಕಾದಾಗ, ಭಾಷೆಯನ್ನು ಸರಳಗೊಳಿಸಬೇಕಾದಾಗ ಅಥವಾ ಹೊಸ ಆಲೋಚನೆಗಳನ್ನು ಚರ್ಚಿಸಬೇಕಾದಾಗ ಇದು ಸಹಾಯ ಮಾಡುತ್ತದೆ.
ನಾನು ವಿಜ್ಞಾನ ಲೇಖನಗಳನ್ನು ಬರೆಯುವಾಗ, ಹೊಸ ವಿಚಾರಗಳನ್ನು ಚರ್ಚಿಸುವಾಗ, ಮತ್ತು ನನ್ನ ಕನ್ನಡ ಪತ್ರಿಕೆಗಾಗಿ ವಿಷಯಗಳನ್ನು ಸಿದ್ಧಪಡಿಸುವಾಗ ಚಾಟ್‌ಜಿಪಿಟಿಯನ್ನು ಬಳಸಿದ್ದೇನೆ. ಇದು ನನ್ನ ಆಲೋಚನೆಗಳಿಗೆ ಪರ್ಯಾಯವಲ್ಲ; ಬದಲಾಗಿ ನನ್ನ ಆಲೋಚನೆಗಳನ್ನು ಇನ್ನಷ್ಟು ಸ್ಪಷ್ಟವಾಗಿ ರೂಪಿಸಲು ಸಹಾಯ ಮಾಡುವ ಒಂದು ಸಾಧನ.
ವಯಸ್ಕರಿಗೆ ಮತ್ತು ಹಿರಿಯರಿಗೆ AI ಬಗ್ಗೆ ಕೆಲವೊಮ್ಮೆ ಒಂದು ಭಯ ಇರುತ್ತದೆ. “ಇದು ಕಷ್ಟವೇ?”, “ನಮ್ಮಿಂದ ಬಳಸಲು ಸಾಧ್ಯವೇ?” ಎಂಬ ಪ್ರಶ್ನೆಗಳು ಬರುತ್ತವೆ. ಆದರೆ ವಾಸ್ತವದಲ್ಲಿ, ಸರಳವಾಗಿ ಕಲಿತರೆ ಯಾರೂ ಇದನ್ನು ಬಳಸಬಹುದು.
ಚಾಟ್‌ಜಿಪಿಟಿಯೊಂದಿಗೆ ಮಾತನಾಡುವುದು ಕೂಡ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವಂತೆಯೇ. ನಮಗೆ ಬೇಕಾದ ವಿಷಯವನ್ನು ಸ್ಪಷ್ಟವಾಗಿ ಕೇಳಿದರೆ, ಅದು ನಮಗೆ ಸಹಾಯ ಮಾಡಲು ಪ್ರಯತ್ನಿಸುತ್ತದೆ. ಕನ್ನಡದಲ್ಲಿಯೂ ಪ್ರಶ್ನೆಗಳನ್ನು ಕೇಳಬಹುದು.
ಆದರೆ ಒಂದು ವಿಷಯ ನೆನಪಿನಲ್ಲಿ ಇರಬೇಕು. ಚಾಟ್‌ಜಿಪಿಟಿ ಎಲ್ಲವನ್ನೂ ತಿಳಿದಿರುವ ಅಂತಿಮ ಜ್ಞಾನಕೋಶವಲ್ಲ. ಕೆಲವೊಮ್ಮೆ ತಪ್ಪು ಉತ್ತರಗಳೂ ಬರಬಹುದು. ಆದ್ದರಿಂದ ಮುಖ್ಯವಾದ ಮಾಹಿತಿಯನ್ನು ಪರಿಶೀಲಿಸುವ ಜವಾಬ್ದಾರಿ ನಮ್ಮದೇ.
ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅದು ನಮ್ಮ ವಯಸ್ಸನ್ನು ನೋಡುವುದಿಲ್ಲ. ಕಲಿಯುವ ಆಸಕ್ತಿ ಇದ್ದರೆ ಹೊಸ ವಿಷಯಗಳನ್ನು ಯಾವ ವಯಸ್ಸಿನಲ್ಲೂ ಕಲಿಯಬಹುದು.
ನನ್ನ ಪಾಲಿಗೆ, ಚಾಟ್‌ಜಿಪಿಟಿ ಒಂದು ಯಂತ್ರ ಮಾತ್ರವಲ್ಲ. ಅದು ನನ್ನ ಬರವಣಿಗೆಯ ಪಯಣದಲ್ಲಿ ಜೊತೆಗಿರುವ ಒಂದು ಹೊಸ ರೀತಿಯ ಡಿಜಿಟಲ್ ಗೆಳೆಯ.
ಈ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ, ಆಸಕ್ತಿ ಇರುವ ವಯಸ್ಕರೊಂದಿಗೆ ಈ ಹೊಸ ಗೆಳೆಯನ ಪರಿಚಯವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಜ್ಞಾನವನ್ನು ಹಂಚಿಕೊಳ್ಳುವುದು ಕೂಡ ಒಂದು ಸಂತೋಷದ ಅನುಭವ.
ಈ ನನ್ನ ಹುಟ್ಟುಹಬ್ಬದ ( 25/07) ನಂತರ ಈ ಸಂಚಿಕೆಯಲ್ಲಿ, ಆಸಕ್ತಿ ಇರುವವರೊಂದಿಗೆ ಈ ಹೊಸ ಗೆಳೆಯನ ಪರಿಚಯವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಜ್ಞಾನವನ್ನು ಹಂಚಿಕೊಳ್ಳುವುದು ಕೂಡ ಒಂದು ಸಂತೋಷದ ಅನುಭವ.
ಹೊಸ ತಂತ್ರಜ್ಞಾನವನ್ನು ಭಯದಿಂದಲ್ಲ, ಕುತೂಹಲದಿಂದ ಸ್ವೀಕರಿಸೋಣ.
ಉಚಿತ ಆನ್‌ಲೈನ್ ಚಾಟ್‌ಜಿಪಿಟಿ ತರಬೇತಿ
ಆಸಕ್ತರಿಗಾಗಿ ಎರಡು ಉಚಿತ ಆನ್‌ಲೈನ್ ತರಗತಿಗಳನ್ನು ನಡೆಸಲಾಗುವುದು. ಪ್ರತಿ ತರಗತಿಯ ಅವಧಿ ಒಂದು ಗಂಟೆ. ಆಸಕ್ತರು ಆಗಸ್ಟ್ 15ರೊಳಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಈ ಕೆಳಗಿನ ಫಾರಂ ಮೂಲಕ ಅಥವಾ ನನ್ನ what’s app ಮೂಲಕ ನೋಂದಾಯಿಸಬಹುದು. ನೋಂದಾಯಿಸಿದವರಿಗೆ ದಿನಾಂಕ, ಸಮಯ ಮತ್ತು ಆನ್‌ಲೈನ್ ಲಿಂಕ್ ನಂತರ ತಿಳಿಸಲಾಗುವುದು.
ಈ ಕೆಳಗಿನ ಫಾರಂ ಅನ್ನು ತುಂಬಿ, submit ಬಟನ್ ಒತ್ತಿ .


ಚಿತ್ರಕಲೆ ಹಾಗೂ ಇತರ ಕಲೆಗಳ ವಿಭಾಗ


ಶ್ರೀ ದ ರಾ ಬೇಂದ್ರೆ
ಚಿತ್ರಕಲೆ ಮತ್ತು ಬರಹ :
ಶ್ರೀ ಜಯರಾಂ ಕೆ ವಿ
ದ ರಾ ಬೇಂದ್ರೆ ಅವರು ಕನ್ನಡದ ಅತ್ಯಂತ ಉನ್ನತ ಮಟ್ಟದ ಕವಿ. 1896 ಜನಿಸಿ 1981ರ ವರೆಗೂ ಬಾಳಿದ ಅವರ ಕನ್ನಡಸಾಹಿತ್ಯಕ್ಕೆ ನೀಡಿದ ಕೊಡಿಗೆ ಅಪಾರವಾದದ್ದು.
ಪದ್ಮಶ್ರೀ,ಜ್ಞಾನಪೀಠ ,ಸಾಹಿತ್ಯ ಅಕಾಡೆಮಿ ಈ ರೀತಿ ಹಲವಾರು ಪ್ರಶಸ್ತಿಗಳನ್ನು ಪಡೆದು ಕನ್ನಡ ಭಾಷೆಯ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಸುಮಾರು 70. ವರ್ಷಗಳ ಕಾಲ ದುಡಿದರು.

ಶ್ರೀ ಜಯರಾಂ ಕೆ ವಿ ಆವರು ರಚಿಸಿದ ಇನ್ನೊಂದು ಚಿತ್ರಕಲೆ, ಮತ್ತು ಬರಹ

ಈ ಭಾವಚಿತ್ರವು ಒಬ್ಬ ಸಂದರ್ಶಕಿಯದ್ದು – ಬಹುಶಃ ಇರಾನಿನ ಹುಡುಗಿ – ವಿಶ್ವಕಪ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ, ಒಬ್ಬ ಛಾಯಾಗ್ರಾಹಕ ಅವಳನ್ನು ಕ್ಯಾಮೆರಾ ಮೂಲಕ ತೋರಿಸುತ್ತಿದ್ದನು. ಅವಳು ಎಲ್ಲಾ ಕಣ್ಣುಗಳ ಆಕರ್ಷಣೆ ತನ್ನತ್ತ ಬೀರಿದೆ ಎಂದು ಅರಿತುಕೊಂಡ ತಕ್ಷಣ , ಕಣ್ಣು ಮುಚ್ಚಿ ಸುಂದರವಾದ ನಗುವನ್ನು ಬೀರಿದಳು.

ಶ್ರೀ ಎಸ್ ವಿಠ್ಠಲ ರಾವ್ ಅವರು ರಚಿಸಿದ ಚಿತ್ರಕಲೆಗಳು




ಶ್ರೀಮತಿ ಮೀರಾ ಜಯರಾಂ ಅವರು ರಚಿಸಿರುವ ಚಿತ್ರಕಲೆಗಳು


ಭಾರತೀಯ ಜಾನಪದ ಕಲೆ- ವಾರ್ಲಿ ಕಲೆ
ಬರಹ : ಶ್ರೀಮತಿ ಮೀರಾ ಜಯರಾಂ
ಭಾರತೀಯ ಜಾನಪದ ಕಲೆ- ವಾರ್ಲಿ ಕಲೆ
ವಾರ್ಲಿ ಕಲೆ ಭಾರತದ ಪ್ರಮುಖ ಬುಡಕಟ್ಟು ಜಾನಪದ ಕಲಾ ಪ್ರಕಾರಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಮಹಾರಾಷ್ಟ್ರದ ಉತ್ತರ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಈ ಚಿತ್ರಗಳನ್ನು ಸಾಮಾನ್ಯವಾಗಿ ಮಣ್ಣಿನ ಬಣ್ಣದ ಗೋಡೆಗಳ ಮೇಲೆ ಕೇವಲ ಬಿಳಿ ಬಣ್ಣವನ್ನು ಬಳಸಿ ಅತ್ಯಂತ ಸರಳವಾಗಿ ಬಿಡಿಸಲಾಗುತ್ತದೆ. ಈ ಚಿತ್ರಗಳಲ್ಲಿ ನೃತ್ಯ ಮಾಡುವುದು, ಬೀಜ ಬಿತ್ತುವುದು, ಬೆಳೆ ಕೊಯ್ಯುವುದು, ಬೇಟೆಯಾಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವ ಮಾನವ ಆಕೃತಿಗಳನ್ನು ಚಿತ್ರಿಸುತ್ತಾರೆ.
ಈ ಚಿತ್ರಗಳು ದೇವರ ಶಕ್ತಿಯನ್ನು ಆಹ್ವಾನಿಸುತ್ತವೆ ಅಥವಾ ದೈವಿಕ ಆಶೀರ್ವಾದವನ್ನು ತರುತ್ತವೆ ಎಂಬ ನಂಬಿಕೆ ಇದೆ.
ಇಲ್ಲಿ ನಾನು ವಾರ್ಲಿ ಶೈಲಿಯ ಎರಡು ಚಿತ್ರವನ್ನು ಬಿಡಿಸಿದ್ದೇನೆ.
ಅವುಗಳನ್ನು ಈ ಕೆಳಗೆ ಕೊಡಲಾಗಿದೆ.
ವಾರ್ಲಿ ಕಲೆ- ಚಿತ್ರಗಳು



ಕುಮಾರಿ ತೀಕ್ಷ್ಣ ಅವರು ರಚಿಸಿರುವ ಚಿತ್ರಕಲೆಗಳು

ಶ್ರೀಮತಿ ಮಯೂರಿ ಮತ್ತು ಶ್ರೀಮತಿ ಶಾಂಭವೀ ಅವರು ಮಾಡಿರುವ ನೂತನ ಬ್ಯಾಗ್ ಗಳು
( ಇದು ಚಿತ್ರಕಲೆಯಲ್ಲ , ಈ ಬ್ಯಾಗ್ ಗಳು ಕೊಳ್ಳಲು ಸಿಗುತ್ತವೆ ) .ಇವರ ಇನ್ಸ್ಟಾಗ್ರಾಂ ಲಿಂಕ್, ಹಾಗೂ ಇವರ ತಂಬೂಲಮ್ ಟೇಲ್ಸ್ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಕೊಡಲಾಗಿದೆ.




ಮನೆಯಲ್ಲಿ ಅರಳಿದ ಪರಿಜಾತದ ಹೂ ಗಳಿಂದ ರಂಗೋಲಿ : – ಶ್ರೀಮತಿ ಗೀತಾ ಕೃಷ್ಣಮೂರ್ತಿ

ಸುದ್ಧಿ ವಿಭಾಗ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಎಂ ಎನ್ ಕೋಟೆಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವವು ಪ್ರತಿ ವರ್ಷ ಆಷಾಢ ಮಾಸ ಶುಕ್ಲ ಪಕ್ಷ ದ್ವಾದಶಿಯಂದು ನಡೆಯುತ್ತದೆ . ಇದರ ಎಲ್ಲಾ ಕಾರ್ಯಕ್ರಮಗಳನ್ನು ಮೂಗನಾಯಕನ ಕೋಟೆಯ ಶಾನುಭೋಗರ ಮನೆಯವರು ನಡೆಸುತ್ತಾರೆ.
ವಿಶೇಷವಾಗಿ ಏಕಾದಶಿಯಂದು ಧನುಸ್ಸು (ಕಬ್ಬಿಣದ ಬಿಲ್ಲು ಮತ್ತು ಬಾಣ,ಸುಮಾರು 200 ಕೆಜಿ) ಎತ್ತುವ ಕಾರ್ಯಕ್ರಮವು ನಡೆಯುತ್ತದೆ. ಮುಳ್ಳಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ .ಬೆಳಗ್ಗೆಯಿಂದ ಉಪವಾಸವಿದ್ದು
ಅಂದು ಶ್ರದ್ಧಾ ಭಕ್ತಿಯಿಂದ ನಾಯಕ ಜನಾಂಗದ ಪಾಂಡುರಂಗಯ್ಯ ಎಂಬ ವ್ಯಕ್ತಿ ದೇವತಾ ಕೆಲಸವನ್ನು ನೆರವೇರಿಸುತ್ತಾರೆ.


ಪ್ರಥಮವಾಗಿ ಶಾನುಭೋಗರ ಮನೆಗೆ ಬಂದು ಧನಸ್ಸಿಗೆ ಪೂಜೆಯಾದ ನಂತರ ಉಪವಾಸ ವ್ರತವನ್ನು ಮುಗಿಸುತ್ತಾರೆ ನಂತರ , ಗಜೇಂದ್ರನಿಗೆ ಗಜೇಂದ್ರ ಮೋಕ್ಷವಾಗುತ್ತದೆ.

ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಕಲ್ಯಾಣ ಉತ್ಸವವು ನಡೆಯುತ್ತದೆ.


ಬೆಳಗ್ಗೆ ದ್ವಾದಶಿಯಂದು , ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯನ್ನು ಊರಿನ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಿ ರಥೋತ್ಸವದಲ್ಲಿ ಕುಳ್ಳಿರಿಸಿ, ತದನಂತರ ಗ್ರಾಮ ದೇವತೆಗಳಾದ ಕೊಲ್ಲಾಪುರದಮ್ಮ ಮತ್ತು ಕೆಂಪಮ್ಮ (ಸಾಗಸಂದ್ರದಮ್ಮ) ದೇವರುಗಳು ಬರುತ್ತವೆ.



ನಂತರ, ಗೋವಿಂದ ನಾಮಸ್ಮರಣೆಯಿಂದ ರಥವನ್ನು ಎಳೆಯುತ್ತಾರೆ.

ನಿಮ್ಮ ಅಭಿಪ್ರಾಯಗಳು
ಡಾಕ್ಟರ್ ಚಂದ್ರಶೇಖರ್ ರಾವ್ ಅವರ ಅಭಿಪ್ರಾಯಗಳು
ನಾನು ಸ್ಪರ್ಧೆಯಲ್ಲಿ ಭಾಗವಹಿಸುವುದು ಬೇಡವೆಂದುಕೊಂಡಿದ್ದರು ಸಹ, ರಾಮಾಯಣ ಮಹಾಭಾರತ ಕಾಲದಲ್ಲಿ ಮೊಬೈಲ್ ಇದ್ದಿದ್ದರೆ ಎಂಬ ಸ್ಪರ್ಧೆಯು ನನ್ನನ್ನು ತುಂಬಾ ಪ್ರೇರೇಪಿಸಿ ಭಾಗವಹಿಸುವಂತೆ ಮಾಡಿತು.
ಆದರೆ, ಇಂತಹ ಉತ್ತಮ ಸ್ಪರ್ಧೆಗಳುಳ್ಳ ಈ ಸಂಚಿಕೆಯಲ್ಲಿ. ಕೇವಲ ಕೆಲವರು ಮಾತ್ರ ಭಾಗವಹಿಸುತ್ತಿರುವುದು ವಿಷಾದನೆಯವೇ ಸರಿ. ಅದಕ್ಕಾಗಿ ನನ್ನ ಪುಟ್ಟ ಸಲಹೆಯನ್ನು ಇಲ್ಲಿ ಕೊಟ್ಟಿದ್ದೇನೆ.
ಸ್ಪರ್ಧಿಸಲು ತುಂಬಾ ಜನ ಭಾಗವಹಿಸಲಿ ಅಂತ ನಮ್ಮೆಲ್ಲರ ಆಶಯ, ಆದರೆ ಅದು ಯಾಕೋ ತುಂಬಾ ಕಡಿಮೆ ಜನ ಭಾಗವಹಿಸುತ್ತಿದ್ದಾರೆ ಏನಾದರೂ ಮಾಡಿ ಭಾಗವಹಿಸುವವರನ್ನು ಹೆಚ್ಚಿಗೆ ಭಾಗವಹಿಸಲು ಪ್ರೋತ್ಸಾಹಿಸಲು ನಾವು ಪ್ರಯತ್ನಿಸಬೇಕು ಇದಕ್ಕಾಗಿ ನನ್ನ ಸಲಹೆಗಳಿವೆ .
1)ಮೊದಲನೇದಾಗಿ ಬಹುಮಾನಗಳನ್ನು ಹೆಚ್ಚಿಸುವುದು. ಒಂದೋ ,ಎರಡೊ ಬಹುಮಾನ ಇರುವುದರಿಂದ ಹೀಗಾಗಿತ್ತಿದೆಯೇ ?ಅದನ್ನು ನೋಡಿ ಸರಿಯಾಗಿ ತೀರ್ಮಾನ ಮಾಡಬೇಕು. ಆದರೆ, ಅದಕ್ಕೆ ಹೆಚ್ಕು ಹಣ ಬೇಕಾಗುತ್ತದೆ.
2) ಹೆಚ್ಚು ಜನರು ಬಹುಮಾನಗಳನ್ನು ಕೊಡುವವರು ಮುಂದೆ ಬಂದರೆ ಸಾಧ್ಯವಾಗುತ್ತದೆ .
