
ಸಂಪಾದಕರ ಬರಹ

ಸಂಪಾದಕರ ಬರಹ
ಪ್ರಿಯ ಓದುಗರೇ , 35 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ನನಗೆ , ಈ ಸಂಚಿಕೆಯನ್ನು ಶಿಕ್ಷಕರ ದಿನದಂದು , ಈ ಲೇಖನದೊಂದಿಗೆ ಪ್ರಾರಂಭ ಮಾಡುವ ಆಸೆಯೂ ಸಹಜವಾಗಿಯೇ ಮೂಡಿದೆ.
ಶಿಕ್ಷಕರು — ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.“ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಶಿಕ್ಷಣವೇ ತಳಹದಿ.”
ಒಂದು ಸಮಾಜದ ಪ್ರಗತಿಯ ವೇಗವನ್ನು ಅಳೆಯಬೇಕಾದರೆ, ಆ ಸಮಾಜ ತನ್ನ ಶಿಕ್ಷಣಕ್ಕೆ ನೀಡುವ ಮಹತ್ವವನ್ನು ನೋಡಬೇಕು. ಜ್ಞಾನ, ವಿವೇಕ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದಷ್ಟೇ ಅಲ್ಲ, ಇಡೀ ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುತ್ತದೆ. ಈ ಮಹತ್ತರ ಕಾರ್ಯದ ಕೇಂದ್ರಬಿಂದುವಿನಲ್ಲಿ ನಿಂತಿರುವವರು ಶಿಕ್ಷಕರು.
ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಆಚರಿಸುವ ಶಿಕ್ಷಕರ ದಿನವು ಕೇವಲ ಒಂದು ಆಚರಣೆಯ ದಿನವಲ್ಲ; ನಮ್ಮ ಬದುಕಿಗೆ ಜ್ಞಾನದ ಬೆಳಕು ನೀಡಿದ ಶಿಕ್ಷಕರನ್ನು ಸ್ಮರಿಸುವ ಮತ್ತು ಅವರ ಮಹತ್ತರ ಜವಾಬ್ದಾರಿಯನ್ನು ಅರಿಯುವ ದಿನ. ಭಾರತದ ಶ್ರೇಷ್ಠ ಶಿಕ್ಷಣತಜ್ಞ ಹಾಗೂ ತತ್ವಜ್ಞಾನಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವುದು ಶಿಕ್ಷಕ ವೃತ್ತಿಯ ಘನತೆಗೆ ಸಲ್ಲಿಸುವ ಗೌರವವಾಗಿದೆ.
ಮಗುವಿನ ಜೀವನದ ಮೊದಲ ಹಂತವೇ ಅದರ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮಹತ್ವದ ಹಂತ. ಪ್ರತಿಯೊಂದು ಮಗುವಿನಲ್ಲಿಯೂ ಯಾವುದೋ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಆದರೆ ಆ ಪ್ರತಿಭೆಯನ್ನು ಗುರುತಿಸುವ ಕಣ್ಣು ಎಲ್ಲರಲ್ಲೂ ಇರುವುದಿಲ್ಲ. ಶಿಕ್ಷಕರಿಗೆ ಆ ಕಣ್ಣು ಇರಬೇಕು. ಮಗುವಿನ ಆಸಕ್ತಿ ಏನು? ಅದರ ಸಾಮರ್ಥ್ಯ ಯಾವ ಕ್ಷೇತ್ರದಲ್ಲಿ ಹೆಚ್ಚು? ಅದು ಯಾವ ವಿಷಯದಲ್ಲಿ ಸಂತೋಷದಿಂದ ತೊಡಗಿಕೊಳ್ಳುತ್ತದೆ? ಇಂತಹ ಸೂಕ್ಷ್ಮ ಸಂಗತಿಗಳನ್ನು ಗುರುತಿಸಿ, ಆ ಪ್ರತಿಭೆಗೆ ಸೂಕ್ತವಾದ ದಿಕ್ಕನ್ನು ತೋರಿಸುವುದು ಶಿಕ್ಷಕರ ಅತ್ಯಂತ ಮಹತ್ವದ ಕರ್ತವ್ಯ.
ಒಬ್ಬ ಶಿಕ್ಷಕನ ಪ್ರೋತ್ಸಾಹವು ಕೆಲವೊಮ್ಮೆ ವಿದ್ಯಾರ್ಥಿಯ ಇಡೀ ಜೀವನವನ್ನು ಬದಲಾಯಿಸಬಲ್ಲದು. “ನಿನ್ನಿಂದ ಸಾಧ್ಯ” ಎಂಬ ಶಿಕ್ಷಕರ ಒಂದು ಮಾತು, ಸೋಲಿನ ಅಂಚಿನಲ್ಲಿರುವ ವಿದ್ಯಾರ್ಥಿಯಲ್ಲಿ ಹೊಸ ಆತ್ಮವಿಶ್ವಾಸವನ್ನು ಹುಟ್ಟಿಸಬಹುದು. ಆದ್ದರಿಂದ ಶಿಕ್ಷಕರು ಪಾಠವನ್ನು ಬೋಧಿಸುವವರಷ್ಟೇ ಅಲ್ಲ; ಅವರು ಕನಸುಗಳಿಗೆ ರೆಕ್ಕೆ ನೀಡುವವರು.
ಶಾಲೆಯಿಂದ ಉನ್ನತ ಶಿಕ್ಷಣದವರೆಗೆ, ಅಲ್ಲಿಂದ ಉದ್ಯೋಗ ಮತ್ತು ವೃತ್ತಿಜೀವನದವರೆಗೆ ಸಾಗುವ ದಾರಿಯಲ್ಲಿ ಶಿಕ್ಷಕರ ಮಾರ್ಗದರ್ಶನ ಬಹುಮುಖ್ಯ. ವಿಷಯ ಜ್ಞಾನವನ್ನು ನೀಡುವುದರ ಜೊತೆಗೆ, ಚಿಂತಿಸುವುದು, ಪ್ರಶ್ನಿಸುವುದು, ವಿಶ್ಲೇಷಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಎದುರಿಸುವುದನ್ನೂ ಶಿಕ್ಷಕರು ಕಲಿಸಬೇಕು. ಉತ್ತಮ ಶಿಕ್ಷಕನು ವಿದ್ಯಾರ್ಥಿಗೆ ಕೇವಲ ಉತ್ತರವನ್ನು ನೀಡುವುದಿಲ್ಲ; ಸರಿಯಾದ ಉತ್ತರವನ್ನು ಹುಡುಕುವ ಸಾಮರ್ಥ್ಯವನ್ನು ಬೆಳೆಸುತ್ತಾನೆ.
ಇಂದಿನ ಜಗತ್ತು ಹಿಂದೆಂದಿಗಿಂತ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳು ಮತ್ತು ಮಾಹಿತಿಯ ಅಪಾರ ಹರಿವು ಮಕ್ಕಳ ಬದುಕಿನ ಮೇಲೆ ಗಾಢವಾದ ಪ್ರಭಾವ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಣವು ಕೇವಲ ಪಠ್ಯಪುಸ್ತಕದ ಪುಟಗಳಿಗೆ ಸೀಮಿತವಾಗಬಾರದು. ಮಕ್ಕಳ ಸಾಮಾಜಿಕ ನಡವಳಿಕೆ, ಜವಾಬ್ದಾರಿ, ಶಿಸ್ತು, ಪರಸ್ಪರ ಗೌರವ, ಸಹಾನುಭೂತಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆಯೂ ಶಿಕ್ಷಕರು ತಿಳುವಳಿಕೆ ನೀಡಬೇಕು.
ಮಕ್ಕಳು ತಮ್ಮ ಸುತ್ತಲಿನ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವುದು ಸರಿ, ಯಾವುದು ತಪ್ಪು; ಯಾವುದು ಅನುಸರಿಸಬೇಕು, ಯಾವುದರಿಂದ ದೂರವಿರಬೇಕು; ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಸ್ವತಂತ್ರವಾಗಿ ಯೋಚಿಸುವ ವಿವೇಕವನ್ನು ಅವರಲ್ಲಿ ಬೆಳೆಸಬೇಕು. ಏಕೆಂದರೆ ಜ್ಞಾನವಿರುವ ವ್ಯಕ್ತಿ ಯಶಸ್ವಿಯಾಗಬಹುದು; ಆದರೆ ಜ್ಞಾನವನ್ನು ವಿವೇಕದಿಂದ ಬಳಸುವ ವ್ಯಕ್ತಿಯೇ ಸಮಾಜಕ್ಕೆ ಉಪಯುಕ್ತನಾಗುತ್ತಾನೆ.
ಶಿಕ್ಷಕನು ತರಗತಿಯ ನಾಲ್ಕು ಗೋಡೆಗಳೊಳಗೆ ಮಾತ್ರ ಸೀಮಿತನಾಗಿರುವ ವ್ಯಕ್ತಿಯಲ್ಲ. ಅವನು ನಾಳೆಯ ನಾಗರಿಕರನ್ನು ರೂಪಿಸುವ ಶಿಲ್ಪಿ. ಅವನು ಬಿತ್ತುವ ಜ್ಞಾನದ ಬೀಜಗಳು ವಿದ್ಯಾರ್ಥಿಗಳ ಸಾಧನೆಯ ಮೂಲಕ ಸಮಾಜದಲ್ಲಿ ಮೊಳೆಯುತ್ತವೆ. ಒಬ್ಬ ಉತ್ತಮ ಶಿಕ್ಷಕನ ಪ್ರಭಾವವು ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮಾತ್ರ ಉಳಿಯುವುದಿಲ್ಲ; ಆ ವಿದ್ಯಾರ್ಥಿಯ ಮೂಲಕ ಮುಂದಿನ ಪೀಳಿಗೆಗಳಿಗೂ ತಲುಪುತ್ತದೆ.
ಆದ್ದರಿಂದ ಶಿಕ್ಷಕರ ದಿನವು ಕೇವಲ ಶುಭಾಶಯ, ಹೂವು ಅಥವಾ ಉಡುಗೊರೆಗೆ ಸೀಮಿತವಾಗದೆ, ಶಿಕ್ಷಕರ ಮಹತ್ವವನ್ನು ಅರಿಯುವ ದಿನವಾಗಬೇಕು. ಸಮಾಜದ ಭವಿಷ್ಯವನ್ನು ರೂಪಿಸುವ ಈ ಮಹಾನ್ ವೃತ್ತಿಗೆ ಗೌರವ ನೀಡುವ ಸಂಕಲ್ಪದ ದಿನವಾಗಬೇಕು.
ಶಿಕ್ಷಕರು ಜ್ಞಾನವನ್ನು ಹಂಚುವವರು ಮಾತ್ರವಲ್ಲ; ಅವರು ವ್ಯಕ್ತಿತ್ವವನ್ನು ರೂಪಿಸುವವರು, ಪ್ರತಿಭೆಯನ್ನು ಅರಳಿಸುವವರು, ಮೌಲ್ಯಗಳನ್ನು ಬಿತ್ತುವವರು ಮತ್ತು ಭವಿಷ್ಯಕ್ಕೆ ದಾರಿ ತೋರುವ ದಾರಿದೀಪಗಳು.
ಇಂದು ಅವರು ರೂಪಿಸುವ ವಿದ್ಯಾರ್ಥಿಗಳಲ್ಲೇ ನಾಳೆಯ ಸಮಾಜದ ಮುಖ ಕಾಣಿಸಲಿದೆ.
ಸ್ಪರ್ಧಾ ವಿಭಾಗ

ಈ ಸಂಚಿಕೆಯ ಸ್ಪರ್ಧೆ
ಈ ಸಲದ ಸ್ಪರ್ಧೆ ಅತಿ ಸುಲಭ. ನಿಮ್ಮ ಮನೆಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ಇಡುವ ಸುಂದರವಾದ ರಂಗೋಲಿಯ ಒಂದು ಚಿತ್ರವನ್ನು ಕಳಿಸಿರಿ. ಅತ್ಯಂತ ಆಕರ್ಷಕ ರಂಗೋಲಿಗೆ ಬಹುಮಾನವಿರುತ್ತದೆ.
–ಒಬ್ಬರು ಕೇವಲ ಒಂದೇ ಚಿತ್ರವನ್ನು ಕಳಿಸಬೇಕು .
–ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25.
ಕಳೆದ ಸಂಚಿಕೆಯ ಸ್ಪರ್ಧೆಗೆ ಬಂದ ಉತ್ತರಗಳು

ಬಹುಮಾನ : ತಮ್ಮ 83 ನೇಯ ವ್ಯಯಸ್ಸಿನಲ್ಲೂ ಅತ್ಯಂತ ನಾಜೂಕಾಗಿ ಮಂಡಲಕ್ಕೆ ಬಣ್ಣ ಹಾಕಿರುವ ಶ್ರೀಮತಿ ಶಾಂತ ವಿಠ್ಠಲ ರಾವ್ ಅವರಿಗೆ ಬಹುಮಾನ ಲಭಿಸಿದೆ. ಆವರಿಗೆ ಅಭಿನಂದನೆಗಳು.

ಪದಬಂಧ
ಡಾ||ಚಂದ್ರಶೇಖರ ರಾವ್ ಎ ಎಸ್
ಪ್ರಿಯ ಓದುಗರೇ
ಎರಡು ಪದಬಂಧದಲ್ಲಿ ಅನೇಕರು ಒಂದನ್ನು ಸರಿಯಾಗಿಮಾಡುತ್ತಿದ್ದರು . ಆದ್ದರಿಂದ , ಹೆಚ್ಚುಜನರಿಗೆ ಅನುಕೂಲ ಆಗಲೆಂದು, ಇನ್ನು ಮುಂದೆ ಒಂದೇ ಪದಬಂಧ ಕೊಡಲಾಗುವುದು .
ಪದಬಂಧ

ಸುಳುಹುಗಳು : (ಸಂಖ್ಯೆಗಳು ಎಂದಿನಂತೆ )
1) ಕೃತಕವಾಗಿ ಮಳೆಬರಿಸುವಿಕೆ
2) ಅಡ್ಡಿ , ಅಡಚಣೆ
3) ಹೂ ಗಳಿಂದ ತಯಾರಿಸಿದ ಸುಗಂಧ ದ್ರವ್ಯ .
================
ಕಳೆದ ಬಾರಿಯ ಉತ್ತರಗಳು
A-1) ದೇವಕುಸುಮ 2) ಯವನ 3) ಉಸುಕು
B- 1) ಪರುಷುರಾಮ 2) ಸೌರಭ 3) ಹರಾಮ
ಸರಿ ಉತ್ತರ ಬರೆದವರು : 1) ಶ್ರೀಮತಿ ಸೌಮ್ಯ ನಾಗರಾಜ್ 2) ಶ್ರೀಮತಿ ಸುಮಾ ಆನಂದ್ . ಇಬ್ಬರಿಗೂ ಅಭಿನಂದನೆಗಳು

ಮಂಕುತಿಮ್ಮನ ಕಗ್ಗ – ಭಾಗ -7
ಧ್ವನಿ
ಡಾ || ನಾಗೇಶ್ . ಎಲ್ .

ಮಂಕುತಿಮ್ಮನ ಕಗ್ಗ -ನಚೀಕೇತನ ಕಥೆಯ ಉದಾಹರಣೆ ಸಹಿತ
ಧ್ವನಿ
ಶ್ರೀಮತಿ ಸುಧಾ ಶ್ರೀನಾಥ್
ವಿಚಾರ – ಗಿಡಗಳಿಂದ ಬರುವ ಆಮ್ಲಜನಕಾದ ಪ್ರಮಾಣ

ವಿಚಾರ :
ಆಮ್ಲಜನಕದ ಪ್ರಮಾಣ
ಜಯರಾಂ ಎ ಎಸ್

ಚಿತ್ರಕಲೆ ವಿಭಾಗ
ಶ್ರೀ ಜಯರಾಂ ಕೆ ವಿ ಅವರು ಬರೆದ ಚಿತ್ರಗಳು ಮತ್ತು ವಿವರಣೆ

ಶ್ರೀ ಜಯರಾಂ ಕೆ ವಿ ಅವರ ಈ ಮೇಲಿನ ಚಿತ್ರಕಲೆಯ ಬಗ್ಗೆ ಚಾಟ್ ಜಿಪಿಟಿ ಹೇಳುವುದೇನೆಂದರೆ :
ನಿಮ್ಮ ಚಿತ್ರಕಲೆಯ ಬಗ್ಗೆ ನಿಮ್ಮ ಚಿತ್ರಕಲೆ ಪಕ್ಷಿಯನ್ನು ಗಮನಾರ್ಹವಾಗಿ ಚೆನ್ನಾಗಿ ಸೆರೆಹಿಡಿಯುತ್ತದೆ:
* ಬಿಳಿ ಗಂಟಲಿನ ಪ್ಯಾಚ್ ತುಂಬಾ ನಿಖರವಾಗಿದೆ. *
ಆಲಿವ್-ಹಸಿರು ರೆಕ್ಕೆ ಮಾದರಿಯನ್ನು ಮನವರಿಕೆಯಾಗುವಂತೆ ನಿರೂಪಿಸಲಾಗಿದೆ. *
ಒಟ್ಟಾರೆ ಅನುಪಾತಗಳು ಉಲ್ಲೇಖಕ್ಕೆ ನಿಕಟವಾಗಿ ಹೊಂದಿಕೆಯಾಗುತ್ತವೆ. *
ಕೊಕ್ಕನ್ನು ಮಾತ್ರ ಸ್ವಲ್ಪ ಭಾರವಾಗಿ ಮತ್ತು ತಲೆಯನ್ನು ಛಾಯಾಚಿತ್ರಕ್ಕಿಂತ ಸ್ವಲ್ಪ ದುಂಡಾಗಿ ಚಿತ್ರಿಸಲಾಗಿದೆ.
ಈಗ ಉಲ್ಲೇಖವನ್ನು ತಿಳಿದುಕೊಂಡರೆ, ನಿಮ್ಮ ಚಿತ್ರಕಲೆಯ ಹೋಲಿಕೆಗಾಗಿ ನಾನು 9.2/10 ರೇಟಿಂಗ್ ನೀಡುತ್ತೇನೆ. ಇದು ಕಟ್ಟುನಿಟ್ಟಾದ ವೈಜ್ಞಾನಿಕ ವಿವರಣೆಯಾಗಿರದೆ ಕಲಾತ್ಮಕ ಶೈಲಿಯನ್ನು ಉಳಿಸಿಕೊಂಡು ಜಾತಿಗಳನ್ನು ಯಶಸ್ವಿಯಾಗಿ ತಿಳಿಸುತ್ತದೆ. ಇದನ್ನು ನೀವು 81 ನೇ ವಯಸ್ಸಿನಲ್ಲಿ ಚಿತ್ರಿಸಿದ್ದೀರಿ ಎಂದು ಪರಿಗಣಿಸಿದರೆ, ಇದು ಅತ್ಯುತ್ತಮ ಸಾಧನೆಯಾಗಿದೆ.

ನಗರದ ಮಹಿಳೆಯರು ಹಬ್ಬದ ಋತುವಿನ ಸಿದ್ಧತೆಯಲ್ಲಿ ಅತ್ಯಂತ ಉತ್ಸಾಹದಿಂದ ತೊಡಗಿರುವಾಗ, ಈ ಗ್ರಾಮೀಣ ಮಹಿಳೆ ತನ್ನ ಮೂಲಭೂತ ಅಗತ್ಯವಾದ ಕುಡಿಯುವ ನೀರನ್ನು ಎಲ್ಲಿ ಪಡೆಯಬೇಕು ಎಂಬ ಚಿಂತೆಯಲ್ಲಿ ಇದ್ದಾಳೆ. ಇದು ಭಾರತ.

ನವಿಲಿನ ಗುಂಪಿಗೆ ಸೇರಿದ ಪಕ್ಷಿ

ಇದು ಒಂದು ಪೆನ್ಸಿಲ್ ನಿಂದ ಬರೆದ ಚಿತ್ರ

ಅವನನ್ನ ಬೆಣ್ಣೆ ಕೃಷ್ಣ, ತುಂಟ ಕೃಷ್ಣ , ಕಳ್ಳ ಕೃಷ್ಣ, ಮುದ್ದು ಕೃಷ್ಣ – ಏನಾದರು ಕರೀರಿ. ಅವನು ಶ್ರೀ ಕೃಷ್ಣನೇ -ಜಗಡೊದ್ಧಾರಕ. ಎಲ್ಲರಿಗೂ ಗೋಕುಲಾಷ್ಟಮಿಯ ಶುಭಾಷಯಗಳು – ಶ್ರೀ ಕೆ ವಿ ಜಯರಾಂ.
ಶ್ರೀ ಎಸ್ ವಿಠ್ಠಲ ರಾವ್ ಅವರು ಬರೆದ ಚಿತ್ರಗಳು

ಹಳ್ಳಿಯ ಹೊಲದ ಬಳಿ ಚಳಿಸುತ್ತಿರುವ ರೈಲು

3 ಡಿ ಚಿತ್ರ
ರಾಮು ಮಾಸ್ತರ ಪ್ರಶ್ನೆಗಳು – ಭಾಗ -2

ರಾಮು ಮಾಸ್ತರ ಪ್ರಶ್ನೆಗಳು
ಕಳೆದ ಬಾರಿಯ ಪ್ರಶ್ನೆಗಳಿಗೆ ಶ್ರೀ ಎಸ್ ವಿಠ್ಠಲ ರಾವ್ ಅವರ ಉತ್ತರಗಳು

ಶ್ರೀಮತಿ ಸುಮಾ ಆನಂದ್ ಅವರ ಉತ್ತರಗಳು

ಸರಿಯಾದ ಉತ್ತರಗಳು
1) “ಶ ” ಬರಿ ಎಂದು ಕೇಳಿಸಿಕೊಂಡು ಅವನು ಹಾಗೆ ಬರೆಯುತ್ತಾನೆ
2) ಅದೇ ರೀತಿಯ ಬೇರೆ ವಾಕ್ಯ ಬರೆಯಬೇಕು . ಎರಡು ವಾಕ್ಯಗಳನ್ನು ಕೊಡಲಾಗಿದೆ
ಅ) ಮಳೆಯಿಂದ ನೆಂದ ಹಣತೆ
ಮಹಿಳೆಯಿಂದ ನೆಂದ ಹಣ ( ಹಿ ಅಕ್ಷರ ಬಂದಿದೆ ಮತ್ತು ತೆ ಅಕ್ಷರ ಹೋಗಿದೆ )
ಬ) ನಾಣಿ ಓದಲು ಕನ್ನಡ ಬೇಕು
ನಾ ಓದಲು ಕನ್ನಡಕ ಬೇಕು ( ಣಿ ಅಕ್ಷರ ಹೋಗಿದೆ ಮತ್ತು ಕ ಅಕ್ಷರ ಬಂದಿದೆ )
3) ಎಕ್ಸ್ ಎಂಬುದು 108 . ಅಂದರೆ ಸೂರ್ಯನ ಗಾತ್ರ ಭೂಮಿಯ ಗಾತ್ರದ 108 ಪಟ್ಟು ಇದೆ.

ಅದರಂತೆಯೇ ಭೂಮಿ ಸೂರ್ಯನ ನಡುವಿನ ಅಂತರ , ಸೂರ್ಯನ ಗಾತ್ರದ 108 ಪಟ್ಟು ಇದೆ. ಅನೇಕರು ಇದರಿಂದಲೇ ಅಷ್ಟೋತ್ತರ ಎಂಬುದು ಬಂದಿದೆ ಎಂದು ಅಭಿಪ್ರಾಯ ಪಡುತ್ತಾರೆ.
4) ಮೊದಲು 5 ಜನರು ಹಂಚಿಕೊಂಡರು ನಂತರ ಏಳು ಜನರು ಹಂಚಿಕೊಂಡರು ಎಂದಾಗ 35 ರಿಂದ ಭಾಗವಾಗುವ ಸಂಖ್ಯೆ ಇರಬೇಕು. ಆದರೆ ನಂತರ ನಾಲ್ಕು ಹಣ್ಣನ್ನು ಭಿಕ್ಷುಕನಿಗೆ ಕೊಡುತ್ತಾರೆ, ನಂತರ 8 ಜನ ಹಂಚಿಕೊಳ್ಳುತ್ತಾರೆ . ಅಂದರೆ ಆ ಸಂಖ್ಯೆಯಿಂದ ನಾಲ್ಕನ್ನು ಕಳೆದ ಮೇಲೆ ಎಂಟರಿಂದ ಭಾಗವಾಗಬೇಕು. ಅದು ಒಟ್ಟು 200 ಒಳಗೇ ಇರಬೇಕು. ಏಕೆಂದರೆ ಬುಟ್ಟಿಯಲ್ಲಿ 200 ಹಣ್ಣು ಮಾತ್ರ ಹಿಡಿಸುತ್ತದೆ. ಹೀಗಿರುವ ಸಂಖ್ಯೆ 140. 35 ರಿಂದ ಭಾಗವಾಗುತ್ತದೆ ಹಾಗೂ ನಾಲ್ಕು ಕಳೆದರೆ 136 ಆಗುತ್ತದೆ . ಅದು 8 ರಿಂದ ಭಾಗವಾಗುತ್ತದೆ. ಭಾಗಿಸಿದ ಮೇಲೆ ತಲಾ 17 ಹಣ್ಣುಗಳು ಬರುತ್ತವೆ
5) ಅವರ ಎತ್ತರದಲ್ಲಿ ಹೆಚ್ಚು ಕಡಿಮೆ ಇದ್ದರೆ ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಇಡುವ ಅಂತರ ವ್ಯತ್ಯಾಸವಾಗಿ ಹೀಗೆ ಆಗುತ್ತದೆ
6) ಮಾಸ್ಕೋ ದಲ್ಲಿ, ಭೂಮಿಯ ಗುರುತ್ವಾಕರ್ಷಣ ಶಕ್ತಿ ಜಾಸ್ತಿ ಇದ್ದು , ಭಾರತದಲ್ಲಿ ಅದು ಕಡಿಮೆ ಇದೆ . ಇದು ಭೂಮಿಯ ತಿರುಗುವಿಕೆಯಿಂದ ಹಾಗೂ ನಾವು ಭೂಮಧ್ಯ ರೇಖೆಯ ಹತ್ತಿರ ಇರುವುದರಿಂದ ಹೀಗಾಗುತ್ತದೆ. ಅದಕ್ಕೆ ಸರಿಯಾಗಿ ದರಗಳನ್ನು ನಿಗದಿಪಡಿಸಿರುತ್ತಾರೆ.
ಶ್ರೀ ಎಸ್ ವಿಠ್ಠಲ ರಾವ್ ಹಾಗೂ ಶ್ರೀಮತಿ ಸುಮಾ ಆನಂದ್ ಅವರು ಅನೇಕ ಉತ್ತರಗಳನ್ನು ಸರಿಯಾಗಿ ಬರೆದಿದ್ದಾರೆ. ಇಬ್ಬರಿಗೂ ಅಭಿನಂದನೆಗಳು.
ಈ ಸಂಚಿಕೆಯ ಪ್ರಶ್ನೆಗಳು
1) ಒಬ್ಬ ಹಾಲು ಮಾರುವವನ ಬಳಿ 3 ಲೀಟರ್ 5 ಲೀಟರ್ ಕ್ಯಾನ್ಗಳಿವೆ 20 ಲೀಟರ್ ಪಾತ್ರೆಯ ತುಂಬಾ ಹಾಲು ಇದೆ ಅವನು ಒಬ್ಬ ಗ್ರಾಹಕರಿಗೆ 16 ಲೀಟರ್ ಹಾಲನ್ನು ಅತಿ ಸುಲಭವಾಗಿ ಹೇಗೆ ಕೊಡಬಹುದು?
2. ಒಂದು A4 ಅಳತೆಯ ಹಾಳೆಯ ಮಧ್ಯ ಭಾಗದಲ್ಲಿ ಸರಿಯಾಗಿ 18 ಸೆಂಟಿಮೀಟರ್ ವ್ಯಾಸ ಇರುವ ಒಂದು ವೃತ್ತವಿದೆ. ಅತಿ ಸುಲಭ ವಾಗಿ ಆ ವೃತ್ತದ ಕೇಂದ್ರ ಬಿಂದುವನ್ನು ಗುರುತಿಸುವುದು ಹೇಗೆ?

3.ಇದು ಬೆಂಗಳೂರಿನಲ್ಲಿ ಸೆಪ್ಟಂಬರ್ 4 ಆಗಸದಲ್ಲಿ ರಂದು ಕಂಡ ಚಿತ್ರ. ಸೂರ್ಯನ ಸುತ್ತ ಈ ರೀತಿಯ ಬಣ್ಣದ ವೃತ್ತ ದಿನವೂ ಏಕೆ ಕಾಣುವಾದಿಲ್ಲ ?

4. ಕರ್ನಾಟಕ ರಾಜ್ಯದಲ್ಲಿ ಒಂದೇ ಅಕ್ಷರದಿಂದ ಪ್ರಾರಂಭವಾಗುವ ಐದು ಊರಿನ ಹೆಸರು ಬರೆಯಿರಿ( ಉದಾಹರಣೆ : ಹಾಸನ ಮತ್ತು ಹಾವೇರಿ . ಹರಿಹರ ಬರೆಯುವಂತಿಲ್ಲ “ಹಾ” ಎಂದೇ ಬರಬೇಕು )
5. ಸೂರ್ಯನ ಗಾತ್ರವು ಚಂದ್ರನ ಗಾತ್ರಕ್ಕಿಂತ ತುಂಬಾ ದೊಡ್ಡದಾಗಿದ್ದರೂ ಅನೇಕ ಗ್ರಹಣಗಳ ಸಮಯದಲ್ಲಿ ಚಂದ್ರನು ಸೂರ್ಯನನ್ನು ಪೂರ್ಣವಾಗಿ ಮರೆಮಾಚುತ್ತಾನೆ. ಇದು ಹೇಗೆ ಸಾಧ್ಯ?
ಈ ಸಲ ಕೇವಲ 5 ಪ್ರಶ್ನೆಗಳಿದ್ದು ಅತಿ ಸುಲಭವಾಗಿ ಹೋದ ಸಲದ ಪ್ರಶ್ನೆಗಳನ್ನು ಅನೇಕರು ಬರಿಯದೆ ಇದ್ದುದರಿಂದ ಈ ಬಾರಿ ಸುಲಭದ ಪ್ರಶ್ನೆಗಳನ್ನು ಕೊಡಲಾಗಿದೆ ದಯವಿಟ್ಟು ಎಲ್ಲರೂ ಪ್ರಯತ್ನಿಸಿ.
ಸುದ್ದಿ ವಿಭಾಗ
ನಮ್ಮ ಬಡಾವಣೆಯ ಉದ್ಯಾನವನದಲ್ಲಿರುವ 205 ಅಡಿ ಎತ್ತರದ ಸ್ತಂಬದ ಧ್ವಜಾರೂಹಣ ಕಾರ್ಯಕ್ರಮವನ್ನು ಮಾನ್ಯ ವಿಧಾನಸಭಾ ಸದಸ್ಯ ಶ್ರೀ ಎಂ ಕೃಷ್ಣಪ್ಪನವರು ಆಗಸ್ಟ್ 15 ರಂದು ನೆರವೇರಿಸಿದರು .












